ರಾಸಾಯನಿಕ ಶಕ್ತಿ  - 
ಸಂಯುಕ್ತಗಳಲ್ಲಿರುವ ರಾಸಾಯನಿಕ ಬಂಧಗಳ ರಚನೆ ಮತ್ತು ಛೇದನ (ಮುರಿಯುವಿಕೆ) ಸಂಬಂಧಿತ ಶಕ್ತಿ ಸಂಚಯ; ವಿಭವಶಕ್ತಿಯ ಒಂದು ರೂಪ (ಕೆಮಿಕಲ್ ಎನರ್ಜಿ). ರಾಸಾಯನಿಕ ಕ್ರಿಯೆಗಳಲ್ಲಿ ಬಿಡುಗಡೆಯಾಗುವ ಶಕ್ತಿ ಎಂಬ ವ್ಯಾಖ್ಯಾನವೂ ಉಂಟು.

ಯಾವುದೇ ರಾಸಾಯನಿಕ ಕ್ರಿಯೆ ಎರಡು ಹಂತಗಳಲ್ಲಿ ಜರಗುತ್ತದೆ. ಮೊದಲು, ಅಭಿಕರ್ಮಕಗಳ (ರಿಆ್ಯಕ್ಟೆಂಟ್) ಬಂಧಗಳು ಮುರಿಯತ್ತವೆ. ತದನಂತರ ಘಟಕಗಳು ಹೊಸ ಬಂಧಗಳನ್ನು ರೂಪಿಸಿಕೊಂಡು ಹೊಸ ಪದಾರ್ಥಗಳಾಗುತ್ತವೆ. ಬಂಧ ಮುರಿದಾಗ ಶಕ್ತಿ ಬಿಡುಗಡೆಯೂ ರೂಪುಗೊಂಡಾಗ ಹೀರಿಕೆಯೂ ಆಗುತ್ತದೆ. ಮುರಿಯುವ ಅಥವಾ ರೂಪುಗೊಳ್ಳುವ ಬಂಧಬಲಕ್ಕೆ ಅನುಪಾತೀಯವಾಗಿ ಶಕ್ತಿ ಬಿಡುಗಡೆ ಅಥವಾ ಹೀರಿಕೆ ಆಗುತ್ತದೆ. ರಾಸಾಯನಿಕ ಕ್ರಿಯೆಗಳಲ್ಲಿ ಉಷ್ಣಶಕ್ತಿಯ ಬಿಡುಗಡೆ ಅಥವಾ ಹೀರಿಕೆ ಆಗುವದು ಪ್ರಸಾಮಾನ್ಯ. ಹೀರಿಕೆಗಿಂತ ಹೆಚ್ಚು ಉಷ್ಣಶಕ್ತಿ ಬಿಡುಗಡೆ ಆಗುವ ರಾಸಾಯನಿಕ ಕ್ರಿಯೆಗಳೇ ಬಹಿರುಷ್ಣಕ (ಎಕ್ಸೊಥರ್ಮಿಕ್) ಕ್ರಿಯೆಗಳು (ಉದಾ: ಕಾರ್ಬನ್‍ಭರಿತ ಇಂಧನಗಳ ದಹನ); ಕಡಿಮೆ ಆಗುವವು ಅಂತರುಷ್ಣಕ (ಎಂಡೊ ಥರ್ಮಿಕ್) ಕ್ರಿಯೆಗಳು (ಉದಾ: ದ್ಯುತಿ ಸಂಶ್ಲೇಷಣೆ, ಕ್ಯಾಲ್ಸಿಯಮ್ ಕಾರ್ಬೊನೇಟಿನ ವಿಘಟನೆ). ಈ ಎಲ್ಲ ಶಕ್ತಿ ರೂಪಾಂತರಗಳೂಶಕ್ತಿ ಸಂರಕ್ಷಣ ನಿಯಮಾನುಸಾರ ಜರಗುತ್ತವೆ.

ಪ್ರತಿಯೊಂದು ಪರಮಾಣುವಿಗೂ ಅದ್ವಿತೀಯವಾದ ಶಕ್ತಿಯ ನೆಲಸ್ಥಿತಿ (ಗ್ರೌಂಡ್ ಸ್ಟೇಟ್) ಅಥವಾ ನಿಮ್ನತಮ ಶಕ್ತಿಸ್ಥಿತಿ ಇದೆ. ನಿಗದಿತ ವಿವಿಕ್ತ ಘಟಕಗಳಲ್ಲಿ (ಕ್ವಾಂಟಮ್) ಶಕ್ತಿ ಲಭಿಸಿದರೆ ಮಾತ್ರ ಅವು ಮುಂದಿನ ಅಂಗೀಕಾರಾರ್ಹ ಉದ್ರೇಕಿತ ಸ್ಥಿತಿಯನ್ನು ತಲಪುತ್ತವೆ. ಅಂತೆಯೇ, ಉದ್ರೇಕಿತ ಸ್ಥಿತಿಯಲ್ಲಿರುವ ಪರಮಾಣುಗಳು ನಿಗದಿತ ಕ್ವಾಂಟಮ್ ಶಕ್ತಿಯನ್ನು ಹೊರಹಾಕಿದರೆ ಮಾತ್ರ ತಮ್ಮ ಪೂರ್ವಸ್ಥಿತಿ ಯನ್ನು ತಲಪುತ್ತವೆ. ಪರಮಾಣುಗಳು ಸಂಯೋಗವಾಗಿ ಅಣುಗಳಾಗು ತ್ತವೆ. ಎಂದೇ, ಪ್ರತಿಯೊಂದು ಅಣುವಿಗೂ ಅದ್ವಿತೀಯವಾದ ನೆಲಸ್ಥಿತಿ ಮತ್ತು ಅಂಗೀಕಾರಾರ್ಹ ಕ್ವಾಂಟಮ್ ಸ್ಥಿತಿಗಳಿವೆ. ರಾಸಾಯನಿಕ ಬಂಧಗಳು ಮುರಿಯುವಾಗ ಅಥವಾ ರೂಪುಗೊಳ್ಳುವಾಗ ಅಣುಗಳ ಶಕ್ತಿಸ್ಥಿತಿ ಬದಲಾಗುತ್ತದೆ. ಆದ್ದರಿಂದ, ಶಕ್ತಿಸಂರಕ್ಷಣ ನಿಯಮಾನುಸಾರ ಶಕ್ತಿಯ ಬಿಡುಗಡೆ ಅಥವಾ ಹೀರಿಕೆ ಆಗುತ್ತದೆ.	 
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ